Pages

ಗುರುವಾರ, ಜೂನ್ 23, 2011

ನೀವು ಕನಸು ಕಾಣುತ್ತೀರಾ???



ಕನಸು ಒಂದು ಅನುಭವ. ಸನ್ನಿವೇಶಗಳನ್ನು ನಿಜವಾಗಿಯೂ ಅನುಭವಿಸಿದ ಹಾಗೇ ಭಾಸವಾಗುತ್ತದೆ. ಧ್ವನಿ , ರುಚಿ,  ವಾಸನೆ .. ಇತ್ಯಾದಿ. ಕೆಟ್ಟ ಕನಸು ಕಂಡಾಗ  ಭಯದಲ್ಲಿ  ನಾವು ಬೆವರುತ್ತೇವೆ, ಬೇಸರದ ಕನಸು ಬಿದ್ದಾಗ ನಾವು ಅಳುತ್ತೇವೆ .. ಹೀಗೆ ಹಲವಾರು ರೀತಿಯಲ್ಲಿ ಕನಸು ಭಾಸವಾಗುತ್ತದೆ. ಮಕ್ಕಳಿಂದ  ಮುದುಕರವರೆಗೆ ಎಲ್ಲರೂ ಕನಸನ್ನು ಅನುಭವಿಸುತ್ತಾರೆ. ನಾಯಿ ಬೆಕ್ಕುಗಳು ಕೂಡ ಕನಸು ಕಾಣುತ್ತವೆ......
ಕನಸುಗಳು ಮನುಷ್ಯನ ಅನುಭವದ ಬಯಕೆಯ ಭಂಡಾರ.

 ನಾವು ಕಾಣುವ ಕನಸುಗಳಿಗೆ ಏನು ಅರ್ಥ? ಮೊನ್ನೆಯೊಬ್ಬರು ಹೇಳುವುದನ್ನು ಕೇಳಿಸಿಕೊಂಡೆ "  ಒಳ್ಳೆ ನಿದ್ರೆ   ಒಳ್ಳೆ ಕನಸು ಮಾರಾಯ್ರೆ ! ಅಷ್ಟರಲ್ಲಿ  ಮಗಳು ಬಂದು ಎಬ್ಬಿಸಿದಳು....ಕೆಲವರಂತೂ "ನಂಗೆ ರಾತ್ರಿ ನಿದ್ರೇನೆ ಇಲ್ಲ .ಒಂದರ  ಮೇಲೆ ಒಂದು  ಕೆಟ್ಟ ಕೆಟ್ಟ ಕನಸು.." ಮತ್ತೆ ಕೆಲವರು ಮುಂದೆ ಬರುವ ಸನ್ನಿವೇಷಗಳ ಸೂಚಕ .. ನಾವು ಕಂಡ ಕನಸಿನ ಹಾಗೆ ಆಗುತ್ತೆ ಎನ್ನುವವರು ಇದ್ದಾರೆ .ಕೆಲಮಕ್ಕಳು { ೭ ವಯಸ್ಸಿನ ನಂತರವೂ}  ಹಾಸಿಗೆಯಲ್ಲಿ ಉಚ್ಚೆ ಮಾಡಿ ನಾವು toilet ಹೋಗಿ ಉಚ್ಚೆ ಮಾಡಿದ ಹಾಗೆ ಆಯಿತು. ಆದ್ರೆ ಹಾಸಿಗೆಯಲ್ಲಿ ಉಚ್ಚೆ ಮಾಡಿದ್ದು ಮತ್ತೆ ಅನುಭವಕ್ಕೆ ಬಂತು ಅಂತಾರೆ.
ಕೆಲವರು ಕನಸು ಬಿದ್ದರೆ  ಅದನ್ನು  ಮೆಲುಕು ಹಾಕಲು ಪ್ರಯತ್ನಿಸುತ್ತಾರೆ . ಕೆಲವೊಂದು ಕನಸುಗಳು ನೆನಪಿಗೆ ಬರುವುದಿಲ್ಲ. ಇನ್ನೂ ಕೆಲವರು ಕನಸಿನಲ್ಲಿ ಕಂಡ ದ್ರಶ್ಯಗಳು ಒಳ್ಳೇದೆ ? ಕೆಟ್ಟದೇ ? ಎಂದು ಹಳೆ ಪಂಚಾಂಗ ಹಿಡಿದು ನೋಡುತ್ತಾರೆ .
ನಾವು ಸಣ್ಣವರಿರುವಾಗ  "ರಾಮ ರಾಮ " ಎಂದು ಹೇಳಿದ್ರೆ  ಕೆಟ್ಟ ಕನಸು ಬಿಳುವುದಿಲ್ಲ ಎಂದು ಹೇಳಿ ಸಮಾಧಾನ ಮಾಡ್ತಿದ್ರು.

ಹಾಗಾದ್ರೆ ಕನಸು  ಅಂದ್ರೆ ಏನು ?

ಕನಸಿನ  ಬಗ್ಗೆ  ವಿಷಯಗಳನ್ನು ಚೆನ್ನಾಗಿ  ಜಗತ್ತಿಗೆ ತೋರಿಸಿಕೊಟ್ಟ ಮಹಾ ಮನೋವಿಜ್ಞಾನಿಗಳು  ಫ್ರಾಯ್ಡ್  ಮತ್ತು ಯುಂಗ್ . ಫ್ರಾಯ್ಡ್ ರ ಪ್ರಕಾರ ಕನಸುಗಳು ಸುಪ್ತ ಮನಸ್ಸಿನಲ್ಲಿ ಹುದುಗಿರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇರುವ ಮಾರ್ಗ ಎಂದು ಹೇಳಿದ್ದಾರೆ .ಇವರ ಪ್ರಕಾರ ನಮಗೆ ಇಷ್ಟವಾಗದ ಎಷ್ಟೋ ಭಾವನೆಗಳನ್ನು ( ಕೋಪ ... ನೋವು ..ಇತ್ತ್ಯಾದಿ) ನಮ್ಮ ಸುಪ್ತ  ಮನಸ್ಸಿನೊಳಗೆ ತಳ್ಳಿ ಬಿಡುತ್ತೇವೆ. ನಾವು ನಿದ್ರಿಸುವಾಗ ಸುಪ್ತ ಮನಸ್ಸಿನೋಳಗಿರುವ ವಿಷಯಗಳು ಮೇಲೇರಿ ಬರುತ್ತದೆ.ಆ ಅನುಭವವೇ  ಕನಸು..ಕನಸು ನಮ್ಮ ಮನಸ್ಸಿನ ಸಮತೋಲನ ಕಾಪಾಡಲು ಸಹಾಯವಾಗುತ್ತದೆ ಎಂಬುದು  ಅವರ ವಾದ. ಮನಸ್ಸಿನಲ್ಲಿರುವ ಆತಂಕ ಕನಸುಗಳಲ್ಲಿ ಕಂಡು ನಂತರವೂ  ಸುಪ್ತ ಮನಸ್ಸಿನ ಒತ್ತಡ ಕಡಿಮೆಯಾಗದಿದ್ದರೆ , ಮಿತಿಮೀರಿದ ಮಾನಸಿಕ ದಂದ್ವ ತುಮುಲಗಲಿದ್ದಲ್ಲಿ ನಮ್ಮ ಮಾನಸಿಕ ಸಮತೋಲನ ವ್ಯವಸ್ಥೆ ಕುಸಿದು ನಾವು ಕೆಲವೊಂದು ಮಾನಸಿಕ ಅಸ್ವಸ್ಥಗೆ  ಒಳಗಾಗುತ್ತೇವೆ ಎನ್ನುತ್ತಾರೆ ಫ್ರಾಯ್ಡ್ .
ಕೆಲವೊಂದು ಕನಸುಗಳು ಸಾಂಕೇತಿಕವಾಗಿ ನಮ್ಮ ಆಲೋಚನೆ, ಭಾವನೆ ಬಯಕೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಭಾವನಾತ್ಮಕ ಅನುಭವ.

ಕನಸು ನಮ್ಮ ನಿದ್ರೆಯ ಸಾಮಾನ್ಯ ಅವಿಭಾಜ್ಯ  ಅಂಗ. ಒಂದು ಘಂಟೆ ಕಾಲ ನಿದ್ದೆ ಮಾಡಿದ್ರೆ ಹತ್ತು ಹನ್ನೆರಡು ನಿಮಿಷಗಳ ಕಾಲ ಕನಸು ಬೀಳುತ್ತವೆ. ನಿದ್ರೆಯಲ್ಲಿ ಎರಡು ಹಂತವಿದೆ.
 1.Non rapid eye movement  { ಏನ್. ಅರ್. ಐ ಎಂ }
2. rapid eye movement .{  ಅರ್. ಐ.ಎಂ }

1. Non rapid eye movement  { ಏನ್. ಅರ್. ಐ ಎಂ }
ಈ ಹಂತ ವ್ಯಕ್ತಿಯ ನಿದ್ರೆಯ ಪ್ರಾರಂಬಿಕ ಹಂತ. ವ್ಯಕ್ತಿಗೆ ತನ್ನ ಸುತ್ತ ಮುತ್ತಲಿನ ಆಗು ಹೋಗುಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿವಾಗುತ್ತದೆ.ವ್ಯಕ್ತಿ ತಾನು ಪೂರ್ತಿ ಎಚ್ಚರದಿಂದ ಇದ್ದೆ ಎಂದು ಭಾವಿಸುತ್ತಾನೆ.ಆದರೆ ಅವನು ಎಚ್ಚರದಲ್ಲಿ ಇರುವುದಿಲ್ಲ.  

2. rapid eye movement .{  ಅರ್. ಐ.ಎಂ }
ಅರ್. ಐ.ಎಮ್ ಹಂತದಲ್ಲಿ ವ್ಯಕ್ತಿಯ  ಕಣ್ಣಿನ ಗುಡ್ಡೆಗಳು ವಿರಮಿಸುತ್ತವೆ. ಉಸಿರಾಟ , ಹ್ರದಯ ಬಡಿತದಲ್ಲಿ ಸ್ವಲ್ಪ ಬದಲಾವಣೆಗಳಿರುತ್ತದೆ. ಈ ಹಂತಕ್ಕೆ ಮನುಷ್ಯ ನಿದ್ರೆ ಶುರುವಾದ ಒಂದು  ಘಂಟೆಯ ನಂತರ ತಲುಪುವನು.ಯಾವುದೇ ವ್ಯಕ್ತಿಗೆ  ಈ ಹಂತದಲ್ಲಿ ಕನಸುಗಳು ಬೀಳುತ್ತದೆ. ಹಾಗೂ ಈ ಸಮಯದಲ್ಲಿ  ವ್ಯಕ್ತಿಯನ್ನು ಎಬ್ಬಿಸಿದಾಗ,  ಆತ ಕನಸು ಕಾಣುತಿದ್ದುದಾಗಿ ಹೇಳುತ್ತಾನೆ. ಹಾಗೂ ಕನಸಿನ ಬಗ್ಗೆ ಪೂರ್ತಿ ವಿವರ ಕೊಡುತ್ತಾನೆ.

 ಒಂದು ರಾತ್ರಿಯ ನಿದ್ದೆಯಲ್ಲಿ ಸಾಮಾನ್ಯವಾಗಿ  ಒಂದು ಘಂಟೆಯ ಏನ್. ಅರ್. ಐ.ಎಂ ನಿದ್ರೆ  ನಂತರ ಹತ್ತು ನಿಮಿಷಗಳ  ಅರ್. ಐ.ಎಂ ನಿದ್ರೆ , ಮತ್ತೆ ಪುನ: ಏನ್. ಅರ್. ಐ ಎಂ ನಿದ್ರೆಯಾಗುತ್ತದೆ . ಹೀಗೆ  ಒಂದು ರಾತ್ರಿಯ ನಿದ್ರೆಯಲ್ಲಿ ಕನಿಷ್ಠ ನಾಲ್ಕು - ಐದು ಬಾರಿ ಈ ಚಕ್ರ ಪುನರಾವರ್ತನೆ ಆಗುತ್ತದೆ. ಪ್ರತಿ ರಾತ್ರಿ  ವ್ಯಕ್ತಿಯು ಸುಮಾರು ಐವತ್ತು ನಿಮಿಷಗಳ ಕಾಲ ಕನಸು ಕಾಣುತ್ತಾನೆ. ಎಲ್ಲ ಕನಸುಗಳು ನೆನೆಪಿರುದಿಲ್ಲ ಯಾಕೆಂದರೆ ಕನಸು ಕಾಣುವ   ಅರ್. ಐ.ಎಂ ನಿದ್ರೆಯ ನಂತರ  ಏನ್. ಅರ್. ಐ ಎಂ ನಿದ್ರೆ  ಶುರುವಾಗಿ ಮೊದಲು ಬಿದ್ದ ಕನಸುಗಳು ಮರೆಯಾಗುತ್ತದೆ. ನಿದ್ರಾ ತೊಂದರೆ ಇರುವ ವ್ಯಕ್ತಿ ತನಗೆ ಕನಸಿನಿಂದ ನಿದ್ರೆ ಹಾಳಾಯಿತು ಎನ್ನುತ್ತಾನೆ. ಆದರೆ ವಾಸ್ತವ ಅವನು ನಿದ್ರೆಯಿಂದ ಆಗಾಗ ಎಚ್ಚರವಾಗುವುದರಿಂದ ಕನಸುಗಳು ನೆನೆಪಿರುತ್ತವೆ ! ಕನಸು ಹೆಚ್ಚು ಬಿಳಲೂ  ಇಲ್ಲ !

ಕನಸುಗಳನ್ನು ನಾವು  ವಿಭಾಗಗಳಾಗಿ ವಿಂಗಡಿಸಬಹುದು .

1 ಅರ್ಥವಾಗುವ ಕನಸು.
2.ಅರ್ಥವಾಗುವ  ಅಂದರೆ ಗೊಂದಲ ಉಂಟು  ಮಾಡುವ ಕನಸು.
3. ಅರ್ಥವಾಗದ ವಿಚಿತ್ರ  ಕನಸು.

 1 .ಅರ್ಥವಾಗುವ ಕನಸುಗಳು

ಇಲ್ಲಿ ನಮಗೆ ವಸ್ತುಗಳು ನೇರವಾಗಿ ಪ್ರಕಟಗೊಳ್ಳುತ್ತವೆ. ಬಡವನಿಗೆ ತಾನು ಶ್ರೀಮಂತನಾಗುವ ಕನಸು. ಮಕ್ಕಳಿಲ್ಲದವರಿಗೆ  ಮಕ್ಕಳಾಗುವ ಕನಸು. ಇಂತ ಕನಸು ವ್ಯಕ್ತಿಯ ಮನಸ್ಸಿನ ಬಯಕೆ , ಆಲೋಚನೆಗಳನ್ನು ನೆರವಾಗಿ ತೋರಿಸಿಕೊಡುತ್ತದೆ.ಹೀಗೆ ನೇರ ಕನಸನ್ನ ನಾವು ಕಂಡು ಮನಸ್ಸನ್ನು ಹಗುರಗೊಳಿಸಬಹುದು.


2.ಅರ್ಥವಾಗುವ  ಅಂದರೆ ಗೊಂದಲ ಉಂಟು  ಮಾಡುವ ಕನಸು.

ಇಲ್ಲಿ ಸಹ ಕನಸುಗಳು ಅರ್ಥವಾಗುತ್ತದೆ. ಕನಸುಗಳು ನೇರವಾಗಿರುತ್ತದೆ. ಆದ್ರೆ ಅ ಕನಸು ಯಾಕೆ ಬಿತ್ತು ಎಂಬುದು ಅರ್ಥವಾಗದೆ ನಾವು ತಲೆಕೆಡಿಸಿ ಕೊಳ್ಳುತ್ತೇವೆ. ಕನಸ್ಸಿನಲ್ಲಿ  ಕಾಣುವ ಸನ್ನಿವೇಶಗಳಲ್ಲಿ ನಮಗೆ ಆಸೆಯೋ  ಬಯಕೆಗಳೇನೋ   ಇರುದಿಲ್ಲ.  ಅಷ್ಟೊಂದು ಪರಿಚವಿಲ್ಲದ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದಂತೆ ಅವರೊಡನೆ ಕುಳಿತು ಸಮಯ ಕಳೆದಂತೆ .. ಇತ್ಯಾದಿ..ಒಂದಕ್ಕೊಂದು ಸಂಬಂದವಿರುದಿಲ್ಲ .ಹೀಗೆ  ಎದ್ದು ಕುಳಿತುಕೊಂಡು ನಾವು ಅದರ ಬಗ್ಗೆ ಎಷ್ಟೋ ಸಲ ಯೋಚನೆ ಮಾಡಿ ತಲೆಕೆಡಿಸಿಕೊಳ್ಳುತ್ತೇವೆ.


3. ಅರ್ಥವಾಗದ ವಿಚಿತ್ರ  ಕನಸುಗಳು .

ಇಲ್ಲಿ ಕನಸಿನ ಪ್ರತಿ ದ್ರಶ್ಯವು ಸಾಂಕೇತಿಕ ನಿಗೂಢ ಅರ್ಥವನ್ನು ಒಳಗೊಂಡಿರುತ್ತದೆ.  ಉದಾ :  ಹುಡುಗಿಯೊಬ್ಬಳು   ದಿನವೂ ವಿಚಿತ್ರ ಮತ್ತು ಭಯಾನಕ ಕನಸುಗಳನ್ನು ಕಾಣುತ್ತಿದ್ದಳು. ತನ್ನನ್ನು ನಿರ್ಜನ ಪ್ರದೇಶದಲ್ಲಿ ಯಾರೋ ಅಟ್ಟಿಸಿಕೊಂಡು ಹೋದಂತೆ ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡಿದರೂ ತಪ್ಪಿಸಿಕೊಳ್ಳಲಾಗದೆ ಅವರು ತನ್ನನ್ನು ಕೊಲ್ಲಲು ಯತ್ನಿಸುತ್ತಾರೆ ಎನಿಸುವಾಗ ಕಿರಿಚಿ ಎಚ್ಚರಗೊಳ್ಳುತ್ತಿದ್ದಳು.
ಆಕೆಯೊಂದಿಗೆ  ಮಾತಾನಾಡಿಸಿ,  ಮನೋವಿಶ್ಲೇಷಣೆ ಮಾಡಿದಾಗ ಅವಳಲ್ಲಿರುವ ಗೊಂದಲಗಳು ಸ್ಪಷ್ಟ ವಾಗಿ ಅರ್ಥವಾಯಿತು. ಅವಳ ಪೋಷಕರು ಅವಳನ್ನು ಮದುವೆಯಾಗದಿರಲು ಒತ್ತಾಯಿಸುತಿದ್ದರು. ಆದರೆ ಅಕೆಗೆ ಮಾಡುವೆಯಗಲು ಇಷ್ಟವಿದ್ದು ಹೆತ್ತವರ ವಿರೋಧ ಎದುರಿಸಲು ಶಕ್ತಳಾಗಿರಲಿಲ್ಲ. ಹಾಗಾಗಿ ಮನಸ್ಸಿನ ದಂದ್ವಗಳು  ಸಾಂಕೇತಿಕವಾಗಿ ಕನಸಿನ ರೂಪದಲ್ಲಿ ಕಾಣಿಸಿತು.
 ಕನಸ್ಸು  ಭವಿಷ್ಯ ಸೂಚಕವಲ್ಲ  ಎನ್ನುತ್ತಾನೆ ಫ್ರಾಯ್ಡ್ . ವ್ಯಕ್ತಿಯ ಮನದಾಳದಲ್ಲಿ ಏನು ಆಸೆ ಇರುತ್ತದೆಯೋ ಅದು ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ . ಮತ್ತೆ ಹಾಗೆಯೆ ಅದು ನಡೆದು ಬಿಟ್ಟರೆ ಕನಸ್ಸು ಭವಿಷ್ಯ ಸೂಚಕ ಎಂದುಕೊಳ್ಳುತ್ತೇವೆ ಅಷ್ಟೇ ! ಆದ್ರೆ ಈ ವಿಷಯದ ಮೇಲೆ ಇನ್ನೂ ಅಧ್ಯಯನ ನಡೆಯುತ್ತಿದೆ.

{ಕೆಲಸದ ಒತ್ತಡದಿಂದ ಹಲವಾರು ದಿನಗಳಿಂದ ಈ ಲೇಖನವನ್ನು ಪೂರ್ತಿಗೊಳಿಸಲಾಗದೆ  ನಾನು ಕೂಡ ಈ ಲೇಖನವನ್ನು ಪೂರ್ತಿಗೊಳಿಸಿದ ಕನಸು ಕಂಡಿದ್ದೇನೆ.. ಕಡೆಗೂ ಸಂಪೂರ್ಣಗೊಳಿಸಿ  ನಿಮ್ಮ ಮುಂದೆ ಇಟ್ಟಿದ್ದೇನೆ..( ಕನಸು ನನಸಾಯಿತು!!)  ಇನ್ನೂ ಅನೇಕ ವಿಷಯಗಳಿದ್ದು ಓದುತ್ತಿರುವಾಗಲೆ ನೀವೆಲ್ಲ  ನಿದ್ರೆಗೆ ಜಾರಿ ಕನಸು ಕಾಣದಿರಿ ಎಂದು ಚಿಕ್ಕದಾಗಿ ಬರೆದಿದ್ದೇನೆ..}