Pages

ಮಂಗಳವಾರ, ಜುಲೈ 19, 2011

"ಸ್ವಾಮಿ ನಾವಿರೋದೇ ಹೀಗೆ"!!!!!

ನನಗೆ ಇತ್ತೀಚಿನ ದಿನಗಳಲ್ಲಿ ಯಾಕೊ ದಪ್ಪದವರನ್ನು ನೋಡಿದ್ರೆ " ಅಯ್ಯೋ ಪಾಪ" ಅನಿಸುತ್ತಿದೆ. ಯಾಕೆಂದ್ರೆ ನಾನು ಅವರ ಸಾಲಿನ ಮೊದಲ ಅಭ್ಯರ್ಥಿ! ಅವರ ಕಷ್ಟ ನಂಗೆ ಗೊತ್ತು ಸ್ವಾಮಿ!! ಒಂದು ಮದುವೆ ಮುಂಜಿಗೆ ಹೋಗಲಿಕ್ಕೆ ಇಲ್ಲ , ಅಲ್ಲಿ ಬಂದು ಬಳಗದವರು ಸಿಕ್ಕಿ ಕುಶೋಲೋಪರಿ ವಿಚಾರಿಸಿ"ನಿನ್ನ ಪರಿಚಯ ಆಗಲಿಲ್ಲ ಅಂತ ಅಂದಾಗ ನಮ್ಮ ಬಯೋಡಟಾ ಎಲ್ಲ ಹೇಳುವಷ್ಟರಲ್ಲಿ ಪಕ್ಕದಲ್ಲಿ ಕುಳಿತವರ  ಕಮೆಂಟ್ "ನೀನು ಈಗ ದಪ್ಪ ಆಗಿ ನಿನ್ನ ಪರಿಚಯವೇ  ಸಿಕ್ಲಿಲ್ಲ ". ಇನ್ನು ಕೆಲವರು " ನೀನು ದಪ್ಪ ಆಗಿದ್ದಿಯಲ್ಲ. ಮುಂಚೆ ನೀನು ತುಂಬಾ ಸಪೂರ ಇದ್ದಿಯಲ್ವಾ .....  ನೀನು ಸ್ವಲ್ಪ ಸಣ್ಣಗಿದ್ದರೆ ಚೆನ್ನಾಗಿರೋದು" ...ಎಂಬ ಉಚಿತ ಸಲಹೆ ಬೇರೆ.

ನನ್ನ ಗೆಳಯನೊಬ್ಬ ನಂಗೆ  " ಡುಮ್ಮಿ" ಎಂದು ನಾಮಕರಣ ಬೇರೆ ಮಾಡಿಬಿಟ್ಟಿದ್ದಾನೆ. ನನ್ನ ಪುಟ್ಟದಾದ ಹೆಸರಿಗೆ ಎಷ್ಟು ಬೇಸರ ಆಗಿರದು ಹೇಳಿ... ?
ನನ್ನ ಕೆಲ ಗೆಳೆಯರೋ " ನೀ ಯಾವ ಅಕ್ಕಿ ತಿನ್ನುತ್ತಿ ಮಾರಾಯ್ತಿ? ನಂಗೆ ಸಹ ಕಳುಹಿಸಿಕೊಡು..." ಅಂತಾರೆ ಕೀಟಲೆಗಾಗಿ.
ಇನ್ನು  ನನ್ನ ಅಂಟಿಯವರೋ " ಇಷ್ಟು ಸಣ್ಣ ಪ್ರಾಯಕ್ಕೆ ಹೀಗೆ ದಪ್ಪ ಆದ್ರೆ ಮತ್ತೆ  ಮತ್ತೆ ಬಿ.ಪಿ , ಶುಗರ್ ಬರುತ್ತೆ .. ಜಾಗ್ರತೆ ಮಾಡು. ಸ್ವಲ್ಪ ನಿನ್ನ ತೂಕ ಇಳಿಸು ಎಂದಾಗ ಹೂಂ ಎಂದು ನನ್ನ ತಲೆ ಅಲ್ಲಾಡಿಸುತ್ತೇನೆ.

ಇವರೆಲ್ಲರ  ಮಾತಿಗೆ ಪುಷ್ಟಿಯೊ ಎಂಬಂತೆ ಮೊನ್ನೆ ತುಂಬಿ ತುಳುಕುತ್ತಿದ್ದ  ಮಂಗಳೂರಿನ ಸೀಟಿ ಬಸ್ಸಿನಲ್ಲಿ ನಾನು ಹತ್ತಿದೆ, ಮುಂದಿನಿಂದ ಕಂಡೆಕ್ಟರ್ ಮಹಾಶಯ ಹಿಂದೆ ಹೋಗಿ ಅಂದ್ರೆ ಹಿಂದಿನಿಂದ ಕ್ಲಿನರ್ ಮಹಾಶಯ ಮುಂದೆ ಹೋಗಿ ಎಂದು  ಕಿರುಚಾಡುತ್ತಿದ್ದ. ನಾನೋ ಬಸ್ಸಿನಲ್ಲಿ ನನ್ನ ಪು(ದ)ಟ್ಟ ದೇಹವನ್ನು ಹೇಗಪ್ಪಾ ಸಂಭಾಳಿಸಲಿ. ಅದರೆಡೆಯಲ್ಲಿ ಸ್ಕೂಲ್ ಮಕ್ಕಳ ಬ್ಯಾಗ್ 9 ತಿಂಗಳ ಗರ್ಭಿಣಿಯಂತೆ ತುಂಬಿ ತುಳುಕುತಿತ್ತು. ಬಸ್ಸಿನಿಂದ ಇಳಿಯುವವರ ಕಣ್ಣುಗಳು ನನ್ನನ್ನು ಕೆಕ್ಕೆರಿಸಿ ನೋಡಿದಾಗ ನಂಗೆ ಎಲ್ಲಿಲ್ಲದ ಅಸಾಯಕತನ!.

ಹಾಗದರೆ ದಪ್ಪ ಆಗಿದ್ದು ನನ್ನ ಆಕ್ಷಮ್ಯ ಅಪರಾಧವೆ? ಹೌದು.....ಎನ್ನುತ್ತಿದೆ ನನ್ನ ಮನಸ್ಸು ಕೆಲವೊಮ್ಮೆ!.

ಕಡೆಗೂ ೧೫ ದಿನ  ಊಟ ಬಿಟ್ಟಾದರೂ ಸರಿ ಸಪೂರ ಆಗಲೇ ಬೇಕೆನ್ನುವ ಒಂದು ನಿರ್ಧಾರಕ್ಕೆ ಬಂದೆ. ಹಾಗೊ ಹೀಗೊ ಡಯೇಟ್ ಚಾರ್ಟ್ ತಂದೆ. ಅದರ ಪ್ರಕಾರ  1 ವಾರ ಬರೇ ಹಣ್ಣು ಹಂಪಲನ್ನು ತಿಂದು ಜೀವನ ಮಾಡಬೇಕಿತ್ತು.ಕಡೆಗೂ ಒಳ್ಳೆಯ ದಿನ ನೋಡಿ ನನ್ನ ಡಯಟ್ ನ್ನು ಶುರು ಹಚ್ಚಿಕೊಂಡೆ. ನನ್ನ ಪತಿರಾಯರು ಮತ್ತು ಮಗುವಿಗೆ ನನ್ನ ಕೈ ಆಡುಗೆಯನ್ನು ಚಾಚು ತಪ್ಪದೆ ಉಣಬಡಿಸಿದೆ. ಆದರೆ  ಅವರು ಉಟ ಮಾಡುವಾಗ ನಾನು ಮಾಡಿರುವ ಅಡಿಗೆ ರುಚಿ ಹೇಗಿರಬಹುದು ಎಂದು ಮನಸ್ಸಿಗೆ ಅನಿಸದಿರಲಿಲ್ಲ. ಹೇಗಾದರು ಆ  ದಿನ ನನ್ನ ಮನಸ್ಸನ್ನು ಹಿಡಿತದಲ್ಲಿ ಇರಿಸಿದೆ. ರಾತ್ರಿಯಾಗುವಷ್ಟರಲ್ಲಿ ನನ್ನ ಹಸಿವು ಹದಿನೈದು ದಿನ ಊಟಮಾಡದಿದ್ದ ಹಾಗೆ ಅನಿಸಿತು. ನಮ್ಮವರ ಊಟ ಮುಗಿಯುತಿದ್ದಂತೆ ಚೂರು ಪಾರು ಅನ್ನ ಸಾರು ಉಳಿದಿತ್ತು. ಭೀಮನ ಹೊಟ್ಟೆಗೆ ಕಾಸಿನ ಮದ್ದು! ಆ ಅನ್ನ ಸಾರಿಗೆ ಬೇಸರವಾಗಬಾರದಲ್ಲ! ಕಡೆಗೂ ನನ್ನ ಡಯಟ್ ಚಾರ್ಟ್ ನ್ನು  ಬದಿಗಿರಿಸಿ ಊಟ ಮಾಡಿದಾಗ ಆದ ಸಂತೋಷ ಹೇಳತೀರದು. ಸಂತೋಷ ನನಗಲ್ಲ ..ಅನ್ನ ಸಾರಿಗೆ ಮತ್ತು ನನ್ನ  ಹೊಟ್ಟೆಗೆ. ಯಾಕೆಂದ್ರೆ ಹೊಟ್ಟೆ ಹಸಿವು ಅಷ್ಟರ ಮಟ್ಟಿಗೆ ಇತ್ತು.ಹಾಗಗಿ ಇರುವ ಹಾಗೆಯೇ ಇರೋಣ ಎಂದು ಧ್ರಡ ಸಂಕಲ್ಪ ಮಾಡಿದ್ದೇನೆ.

 ನಾನು ಸಪೂರ ಆದಲ್ಲಿ ನನ್ನ ದಪ್ಪದಿಂದ ಆಗುವ ಕೆಲವು ಪ್ರಯೋಜನಗಳು ಇಲ್ಲದಾಗಬಹುದೆಂಬುದು ಈಗಿನ ನನ್ನ ವಾದ..ಯಾಕೆಂದ್ರೆ ಯಾವುದೇ ಸಭೆ ಸಮಾರಂಬಗಳಲ್ಲಿ ಎದ್ದು ಕಾಣುದು ದಪ್ಪದವರು ತಾನೇ? ಮಕ್ಕಳಿಗೆ " ಓ ದಪ್ಪದ ಅಂಟಿ ಕರಿಯಪ್ಪಾ " ಅಂದಾಗ ಮಗು ಚಾಚು ತಪ್ಪದೆ ನನ್ನ ಹತ್ತಿರ ಬಂದು ನನ್ನ ಕರಿಯುತ್ತೆ. ಪಾಪ ಅದಕ್ಕಾದರೂ ಉಪಕಾರ ನನ್ನ ದಪ್ಪದಿಂದ!
ಹಾಗಗಿ ನಾನು ದಪ್ಪವೇ ಇರೋಣ ಎಂಬ ನಿರ್ಧಾರಕ್ಕೆ ಬಂದೆ. ಯಾಕೆಂದರೆ "ಮದಗಜಗಮನೆ" ಎಂದು ಕರೆಯೋದು ದಪ್ಪದವರನ್ನೆ ತಾನೆ?

ಆದ್ರೆ  ನನ್ನ ಹೆಸರು ಬರೆದು ಮತ್ತು ನನ್ನ ದಪ್ಪದ ಬಗ್ಗೆ " ನೊ ಕಮೆಂಟ್ಸ್ ಪ್ಲೀಸ್ " ಎಂದು ಬೋರ್ಡ್ ಹಾಕುವಾಂತ ತಿರ್ಮಾನಕ್ಕೆ ಬಂದ್ದಿದ್ದೇನೆ....

ಯಾಕೆಂದ್ರೆ "ಸ್ವಾಮಿ ನಾವಿರೋದೇ  ಹೀಗೆ"!!!!!